sri srikanth's Album: Wall Photos

Photo 3 of 20 in Wall Photos

ಅವರು: ಈ ಪುರೋಹಿತಶಾಹಿ ಇದಾರಲ್ವಾ ಸಾರ್, ಅವರು ಎಲ್ರಿಗೂ ನೀರ್ ಕುಡಿಸ್ತಾರೆ, ಅವ್ರು ಡೇಂಜರ್ ಸಾ.

ಇವರು: ಹೌದಾ? ಅದ್ ಹೇಗೆ?

ಅ: ಹೇಗೆ ಅಂದ್ರೆ? ಸಮಾಜದಲ್ಲಿ ಯಾರು ಮುಖ್ಯರು ಅಂತ ಇರ್ತಾರೋ, ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ತಗೊಂಡಿರ್ತಾರೋ ಅವರು ಸಮಾಜಕ್ಕೆ ಸರಿಯಾದ ದಾರಿ ಕೆಲಸ ಮಾಡ್ಬೇಕೇ ಹೊರತು ದಾರಿ ತಪ್ಪಿಸೋ ಕೆಲಸ ಅಲ್ಲ.

ಇ: ಆದ್ರೆ ಆ ಒಂದು ವರ್ಗಕ್ಕೆ 'ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ' ಕೊಟ್ಟದ್ದು ಯಾರು?

ಅ: ಮತ್ಯಾರು, ಸಮಾಜದಲ್ಲಿ ಇದ್ದ ಎಲ್ಲರೂ.

ಇ: ಅದ್ಯಾಕೆ ಆ ಜವಾಬ್ದಾರಿಯನ್ನ ಇವರು ಆ ಸಮುದಾಯಕ್ಕೆ ಕೊಟ್ಟರು?

ಅ: ಅವರು ಓದ್ಕೊಂಡೋರು, ದೇವರನ್ನ ಪೂಜೆ ಮಾಡ್ತಿದ್ದೋರು.. ತುಂಬ ತಿಳ್ಕೊಂಡಿದ್ದೋರು... ಸಮಾಜದ ಉಳಿದ ಯಾರಿಗೂ ಓದು ಬರಹ ಇರ್ಲಿಲ್ಲ. ಹಾಗಾಗಿ ಇವರೆಲ್ಲ ಅವರ ದಾಸರಾದರು.

ಇ: ಅಂದ್ರೆ ಎಲ್ಲಿಂದಲೋ ಬಂದ ಒಂದೋ ಎರಡೋ ಪರ್ಸೆಂಟ್ ಜನ, ಇವರಿಗೆ ಪರಿಚಯವೂ ಇಲ್ಲದೇ ಇದ್ದ ದೇವರನ್ನ ಇವರಿಗೆ ತೋರಿಸಿ, ಇವರನ್ನ ಮರುಳು ಮಾಡಿ, ಇಡೀ ಸಮಾಜಕ್ಕೆ ಮುಖ್ಯಸ್ಥರಾದರು ಅಂತ ನೀವು ಹೇಳ್ತಾ ಇದೀರಿ.

ಅ: ಹೌದು ಸಾ.

ಇ: ಹಾಗಾದ್ರೆ ಇವರು ಆಳಿಸಿಕೊಳ್ಳೋದಕ್ಕೆ ಅರ್ಹರೇ ಅಂತ ಆಯ್ತಲ್ಲ. ಯಾಕಂದ್ರೆ ಎಲ್ಲಿಂದಲೋ ಬಂದ ಒಂದು ಪರ್ಸೆಂಟ್ ಜನರೇ ಇವರನ್ನ ಮರುಳು ಮಾಡಿ ಬುಟ್ಟಿಗೆ ಹಾಕ್ಕೋತಾರೆ ಅಂದ್ರೆ ಇವರಿಗೆ ನಯಾಪೈಸೆ ಸ್ವಂತ ಬುದ್ಧಿ ಇರಲಿಲ್ಲ ಅನ್ನೋದು ಪ್ರೂವ್ ಆಯ್ತು. ಆ ಅವರು ಬಂದು ಇಲ್ಲಿ ಸಾಂಸ್ಕೃತಿಕವಾಗಿ ಎಲ್ಲವನ್ನೂ ಆಕ್ರಮಿಸಿಕೊಂಡಾಗ ಇಲ್ಲಿ ಏನೂ ಇರಲಿಲ್ಲ ಅಂತ ಆಯ್ತು. ಇದ್ದರೆ ಎರಡು ಸಂಸ್ಕೃತಿಗಳ ಮಧ್ಯೆ ಸಂಘರ್ಷ ಆಗಿರೋದು.

ಅ: ಇಲ್ಲಿ ಮಣ್ಣಿನ ಸಂಸ್ಕೃತಿ ಇತ್ತು.

ಇ: ಯಾವ ರೂಪದಲ್ಲಿ?

ಅ: ಹಾಡು, ಕುಣಿತ, ಆಚರಣೆ, ಸಂಪ್ರದಾಯ...

ಇ: ಇಲ್ಲಿ ಏನೂ ಇರಲಿಲ್ಲ ಅಂದ್ರಿ..

ಅ: ಇಲ್ಲ ಸಾ. ಇತ್ತು... ಹಾಡು.. ಕುಣಿತ... ಗೇಯಸಾಹಿತ್ಯ... ಆಚರಣೆ.. ಸಂಪ್ರದಾಯ... ಎಲ್ಲ ಇತ್ತು.

ಇ: ಮತ್ತೆ ನೀವು ಅಂಥ ಎಲ್ಲ ಆಚರಣೆ, ಸಂಪ್ರದಾಯಗಳನ್ನ ವಿರೋಧಿಸ್ತೀರಲ್ಲ. ಎಲ್ಲ ಆಚರಣೆ, ಸಂಪ್ರದಾಯ, ಕಟ್ಟುಪಾಡು, ಹಾಡುಹಸೆ ಕೂಡ ಮೌಢ್ಯ ಅಂತೀರಿ. ಹಾಗಿರುವಾಗ ಆ ಯಾರೋ ಬಂದು ನಿಮ್ಮ ಆ ಸಂಪ್ರದಾಯ, ಆಚರಣೆಗಳನ್ನ ತೆಗೆದುಹಾಕಿದರೆ ನಿಮಗೇನು ಕಷ್ಟ?

ಅ: ಹಾಗಲ್ಲ, ನಮ್ಮ ಆಚರಣೆ, ಸಂಪ್ರದಾಯ ಮೌಢ್ಯ ಅಲ್ಲ.

ಇ: ಅವರದ್ದು ಮಾತ್ರ ಮೌಢ್ಯ?

ಅ: ಇಲ್ಲಿನ ನೆಲಸಂಸ್ಕೃತಿ ನಮ್ಮದು. ಅದನ್ನು ವಿರೋಧಿಸುವುದರಲ್ಲಿ ಅರ್ಥ ಇಲ್ಲ. ಅದು ಮೌಢ್ಯ ಅಲ್ಲ.

ಇ: ಸರಿ ಬಿಡಿ. ನಿಮ್ಮದು ನೆಲಮೂಲದ ಸಂಸ್ಕೃತಿ, ಆಚರಣೆ ಇತ್ಯಾದಿ. ಹೊರಗಿನವರು ತಂದದ್ದೆಲ್ಲ ಮೌಢ್ಯ. ಅದನ್ನು ವಿರೋಧಿಸಬೇಕು. ಇನ್ನು, ಭಾಷೆ..ಲಿಪಿ.. ವಿಚಾರಕ್ಕೆ ಬರೋಣ. ಅವರು ಬಂದಾಗ ನಿಮ್ಮದು ಅನ್ನುವಂಥಾದ್ದು ಲಿಖಿತರೂಪದಲ್ಲಿ ಏನೂ ಇರಲಿಲ್ಲ ಅಲ್ವೇ?

ಅ: ಇತ್ತು, ನಮ್ಮ ಭಾಷೆ ಅವರದ್ದಕ್ಕಿಂತ ಪ್ರಾಚೀನ.

ಇ: ಲಿಪಿ ಕೂಡ?

ಅ: ಲಿಪಿ ಕೂಡ.

ಇ: ಇಲ್ಲಿ ಬರವಣಿಗೆಯಲ್ಲಿ ಏನೂ ಇರಲಿಲ್ಲ ಅಂದ್ರಿ.

ಇ: ಇಲ್ಲ, ಇತ್ತು. ನಮ್ಮವರಿಗೆ ಬರವಣಿಗೆ ಬರ್ತಿತ್ತು.

ಇ: ಮತ್ತೆ ಹಾಗಾದರೆ ಬರೆದಿಟ್ಟದ್ದು ಏನಾದರೂ ಇದ್ದಿರಬೇಕಲ್ಲ?

ಅ: ಎಲ್ಲ ಅವರು ಸುಟ್ಟುಹಾಕಿದ್ರು.

ಇ: ಒಂದ್ಕಡೆ ಹೇಳ್ತೀರಿ, ಅವರು ಒಂದು ಪರ್ಸೆಂಟ್ ಜನ ಬಂದ್ರು ಅಂತ. ಬಂದೋರು ಇಲ್ಲಿನವರಿಗೆ ತಮ್ಮ ಸಂಸ್ಕೃತಿಯನ್ನ ಹೇರಿದರು ಅಂತ. ಇನ್ನೊಂದ್ಕಡೆ ಹೇಳ್ತೀರಿ ನಿಮಗೆ ನಿಮ್ಮದೇ ಆದ ಭಾಷೆ, ಸಂಸ್ಕೃತಿ, ಆಚರಣೆ ಎಲ್ಲ ಇತ್ತು ಅಂತ. ಒಂದ್ಕಡೆ ಹೇಳ್ತೀರಿ ಆಚರಣೆ ಸಂಪ್ರದಾಯ ಮೌಢ್ಯ ಅಂತ. ಇನ್ನೊಂದ್ಕಡೆ ಹೇಳ್ತೀರಿ ನೆಲಮೂಲದ ಸಂಸ್ಕೃತಿ ಆಚರಣೆ ಸಂಪ್ರದಾಯ ಮೌಢ್ಯ ಅಲ್ಲ ಅಂತ. ಒಂದು ಸಮುದಾಯದ ಆಚರಣೆ ಮೌಢ್ಯ ಆಗಿ, ಅದರಂಥದ್ದೇ ಆಚರಣೆ ಇನ್ನೊಂದು ಸಮುದಾಯದಲ್ಲಿ ಮೌಢ್ಯ ಅಲ್ಲ ಅಂತ ಆಗೋದು ಹೇಗೆ? ಬಿಡಿ, ಎಲ್ಲ ಜಾತಿಯವರನ್ನ ದೇವಸ್ಥಾನಕ್ಕೆ ಬಿಡಬೇಕು ಅನ್ನೋದು ಮೌಢ್ಯಾನೋ ವಿಚಾರವಾದಾನೋ?

ಅ: ಎಲ್ಲರಿಗೂ ಸಮಾನತೆ ಬೇಕು. ಎಲ್ಲರನ್ನೂ ದೇವಸ್ಥಾನದೊಳಗೆ ಬಿಡಬೇಕು.

ಇ: ಬಿಡಬೇಕು ಅನ್ನೋದು ನನ್ನ ಆಶಯ ಕೂಡ. ಆದರೆ ದೇವಸ್ಥಾನ ಅನ್ನೋದೇ ಆ ಎಲ್ಲಿಂದಲೋ ಬಂದವರ ಸಂಸ್ಥೆಯಾಗಿರುವಾಗ, ಅದಕ್ಕೆ ಪ್ರವೇಶ ಬೇಕು ಅಂತ ಬಡಿದಾಡ್ತ ಕೂತ್ಕೊಳೋದು ನೀವೇ ನಿಮ್ಮ ನೆಲಮೂಲದ ಸಂಸ್ಕೃತಿಯನ್ನ ವಿರೋಧಿಸಿದ ಹಾಗೆ ಅಲ್ವ? ನಿಮ್ಮದು ಅವೈದಿಕ ಸಂಸ್ಕೃತಿ ಅಂತ ಅಂದ ಮೇಲೆ ನಿಮಗೇಕೆ ಆ ವೈದಿಕ ಸಂಸ್ಕೃತಿಯೊಳಗೆ ಸೇರಿಕೊಳ್ಳುವ ಬಯಕೆ? ಅವರು ನಿಮ್ಮ ಸಂಸ್ಕೃತಿಯನ್ನ ಹೊಡೆದುಹಾಕಿದ್ರು ಅನ್ನೋದಕ್ಕಿಂತಲೂ ನೀವೇ ಇಷ್ಟಪಟ್ಟು ಅದನ್ನ ಒಪ್ಕೊಂಡ್ರಿ ಅನ್ನೋದು ಸಿದ್ಧವಾಗ್ತಾ ಇದೆ.

ಅ: ಇಲ್ಲ. ನಾವು ಅವರ ಸಂಸ್ಕೃತಿಯನ್ನ ವಿರೋಧಿಸ್ತೀವಿ.

ಇ: ಯಾವ ರೀತಿ?

ಅ: ನೋಡಿ, ಅವರು ವೈದಿಕ ಸಂಸ್ಕೃತಿಯಲ್ಲಿ ಮದುವೆ ಮಾಡ್ತಾರೆ. ನಾವು ಮಂತ್ರಮಾಂಗಲ್ಯ ರೀತಿಯಲ್ಲಿ ಮದುವೆ ಮಾಡ್ಕೋತೀವಿ.

ಇ: ಮಂತ್ರ, ಮಾಂಗಲ್ಯ - ಎರಡೂ ಸಂಸ್ಕೃತ ಪದಗಳು. ಅದೂ ಅಲ್ದೆ ಅದು ಶುರುವಾಗೋದೇ 'ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಃ...' ಅಂತ. ಅದು ವೈದಿಕಾನೋ ಅವೈದಿಕಾನೋ?

ಅ: ಬಿಡಿ. ನಾವು ಶವಸಂಸ್ಕಾರ ಮಾಡೋದು ನಮ್ಮ ನೆಲಮೂಲದ ಸಂಸ್ಕೃತಿ ಪ್ರಕಾರ.

ಇ: ಅಂದ್ರೆ ಯಾವ ರೀತಿ ಮಾಡ್ತೀರಿ?

ಅ: ಹೂಳ್ತೀವಿ.

ಇ: ಎಲ್ಲಿ?

ಅ: ಸ್ಮಶಾನದಲ್ಲಿ.

ಇ: ಮತ್ತೆ ಸ್ಮಶಾನದಲ್ಲಿ ಮದುವೆ ಆನಿವರ್ಸರಿ ಇಟ್ಕೊಂಡ್ರಲ್ಲ?

ಅ: ಅದು ಮೌಢ್ಯವನ್ನ ವಿರೋಧಿಸೋದಕ್ಕೆ.

ಇ: ಯಾವ ಮೌಢ್ಯ? ಮದುವೆ ಒಂದು ಮೌಢ್ಯ ಅಂತಾನೋ, ಸ್ಮಶಾನದಲ್ಲಿ ಶುಭಕಾರ್ಯ ಮಾಡಬಾರದು ಅನ್ನೋದು ಮೌಢ್ಯ ಅಂತಾನೋ, ಅಥವಾ ಹೆಣಗಳನ್ನ ಮದುವೆ ಮಂಟಪದಲ್ಲಿ ಹೂಳದೆ ಸ್ಮಶಾನದಲ್ಲಿ ಹೂಳೋದು ಮೌಢ್ಯ ಅಂತಾನೋ?

ಅ: ಸ್ಮಶಾನದಲ್ಲಿ ಶವಸಂಸ್ಕಾರ ಮಾತ್ರ ಮಾಡಬೇಕು ಅನ್ನೋದು ಮೌಢ್ಯ.

ಇ: ಮತ್ತೆ ನೀವೇ ಹೇಳಿದ್ರಿ, ಸತ್ತೋರನ್ನ ಸ್ಮಶಾನದಲ್ಲಿ ಹೂಳ್ತೀವಿ ಅಂತ. ಅಂದ್ರೆ ನಿಮ್ಮದೇ ನೆಲಮೂಲದ ಸಂಸ್ಕೃತಿಯನ್ನ ನೀವೇ ಮೌಢ್ಯ ಅಂತ ಕರೆದು ಪ್ರತಿಭಟನೆ ಮಾಡ್ತಿದೀರಲ್ಲ...! ಆ ಯಾವುದೋ ಒಂದು ಪರ್ಸೆಂಟ್ ಜನ ಬಂದು ನಿಮ್ಮನ್ನ ಆಳಿದ್ದು ಹೇಗೆ ಅಂತ ಈಗ ಅರ್ಥ ಆಯ್ತು ಬಿಡಿ.
ಕೃಪೆ: ರೋಹಿತ್ ಚಕ್ರತೀರ್ಥ ಫೇಸ್ಬುಕ್