Rekha Rani Cashyap's Album: Wall Photos

Photo 1 of 1 in Wall Photos

ಡಾ. ರಾಜ್ ಕುಮಾರ್ ಅವರ ಸಂದರ್ಶನ ಮಾಡಿದ್ದ ಪತ್ರಿಕೆಯ Scan copy ಹಾಕಿದ್ದರೂ ಬಹಳಷ್ಟು ಜನ ಓದಲಾಗಲಿಲ್ಲವೆಂದು ಕೊರಗಿದರು. ಹಾಗಾಗಿ ಟೈಪ್ ಮಾಡಿಸಿ ಹಾಕಿದ್ದೇನೆ. ಡಾ. ರಾಜ್ ಇತ್ತೀಚಿನ ಸಂದರ್ಶನ.
ಲಂಕೇಶ್ ಪತ್ರಿಕೆ ( ಮಾರ್ಚ್ 15, 1992)
*ರೇಖಾರಾಣಿ*
ಮನೆಯೊಳಗೆ ಒದ್ದಾಟ, ಹೊರಪ್ರಪಂಚದಲ್ಲಿ ಕಿತ್ತಾಟ, ಎಲ್ಲಾ ಕಷ್ಟನಷ್ಟಗಳೇ ತುಂಬಿರುವ ಇಂದಿನ ದಿನಗಳಲ್ಲಿ ಬದುಕಲು ಹೋರಾಟ ನಡೆಸುತ್ತಿರುವ ಜನಸಾಮಾನ್ಯನೊಬ್ಬ ತನ್ನ ನೆಮ್ಮದಿಗಾಗಿ, ಮನರಂಜನೆಗಾಗಿ ಮೂರು ಗಂಟೆಗಳ ಕಾಲ ಸಿನಿಮಾ ನೋಡಲು ಹಾತೊರೆಯುತ್ತಾನೆ. ಸಿನಿಮಾ, ಅದರಲ್ಲೂ ಡಾ. ರಾಜ್ ನಟಿಸಿದ ಸಿನಿಮಾ ಅಂದರಂತೂ ಅವನಿಗೆ ಹಾಲು-ಜೇನು ಕುಡಿದಂತೆ !
ಬೆಳಗಿನಿಂದ ಸಾಯಂಕಾಲದವರೆಗೂ ಭಾರ ಹೊತ್ತು ನಲುಗಿದ ಕೂಲಿಯೊಬ್ಬ, ಆಯಾಸ ಪರಿಹಾರಕ್ಕೆ ರಾತ್ರಿ ನಿದ್ದೆ ಮಾಡುವುದನ್ನು ಬಿಟ್ಟು, ಥಿಯೇಟರಿನತ್ತ ಹೆಜ್ಜೆ ಹಾಕುತ್ತಾನೆ. ಬರೀ ಒಳ್ಳೆಯ ಪಾತ್ರಗಳನ್ನು ಮಾಡಿ, ಆದರ್ಶಪ್ರಾಯರಾಗಿದ್ದ ನಾಯಕ ನಟ ರಾಜ್ ರಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾ ಸಂತೋಷಪಡುತ್ತಾನೆ.
ಹಣೆಯ ಮೇಲೆ ದೊಡ್ಡ ಕುಂಕುಮವಿಟ್ಟ ಹೆಂಗಸೊಬ್ಬಳು ಕಾರಿನಲ್ಲಿ ಕುಳಿತಿದ್ದಾಳೆ. ಆಕೆಯನ್ನು ನೋಡಿದ ರಿಕ್ಷಾ ಡ್ರೈವರನೊಬ್ಬ ಕೂಡಲೇ ‘ಪಾರ್ವತಮ್ಮ ಕಣೋ’ ಎಂದು ತನ್ನ ಹಿಂದೆ ಸಾಲಾಗಿ ನಿಂತಿದ್ದ ರಿಕ್ಷಾಗಳಿಗೆ ಕೂಗಿ ಹೇಳಿದ. ಸಿನೀಮಿಯ ರೀತಿಯಲ್ಲಿ ಆಟೋಗಳೆಲ್ಲ ಆ ಕಾರನ್ನು ಸುತ್ತುವರೆದು ಬಲವಂತವಾಗಿ ಕಾರ್ ನಿಲ್ಲಿಸಿದರು. ತೋಳು ತಟ್ಟುತ್ತಾ ಒಬ್ಬ “ಏನು, ಅಣ್ಣಾವ್ರನ್ನ ಮನೇಲಿ ಕೂಡಿಹಾಕಿದ್ದೀರಾ?” ಎಂದ. ಮತ್ತೊಬ್ಬ “ನಿಮ್ಮ ಮಕ್ಕಳು ಸಿನಿಮಾದಲ್ಲಿ ಉದ್ಧಾರವಾಗಬೇಕೂಂತ ಗುರೂನ ಸಿನಿಮಾದಲ್ಲಿ ನಟಿಸ ಬೇಡ ಎಂದಿದ್ದೀರಾ?” “ಈ ವರ್ಷ ಅವರು ಸಿನಿಮಾದಲ್ಲಿ ನಟಿಸದಿದ್ರೆ..” ಆವೇಶದಿಂದ ಹೇಳುತ್ತಿದ್ದವನನ್ನು ತಡೆದು ಮತ್ತೊಬ್ಬ ಗೋಗರೆಯುತ್ತಾ ಹೇಳಿದ- “ಈ ವರ್ಷಾನೂ ನಟಿಸದಿದ್ರೆ ನಾವೆಲ್ಲ ಸಾಲಾಗಿ ಮನೆಮುಂದೆ ಬಂದು ಧರಣಿ ಕೂರ್ತೀವಿ, ಆತ್ಮಾರ್ಪಣೆ ಮಾಡಿಕೊಳ್ತೀವಿ”
ಇವರೆಲ್ಲರ ಧ್ವನಿಯಲ್ಲಿ ರೋಷವಿತ್ತು. ಉದ್ವೇಗವಿತ್ತು. ಪ್ರೀತಿಯ ಜೊತೆಗೆ ಆತ ‘ತಮ್ಮ ಆಸ್ತಿ’ ಎಂಬ ಹಕ್ಕಿನ ಜೊತೆಗೆ ಅಭಿಮಾನವೂ ಇತ್ತು!
ಆ ಅಣ್ಣ-ಗುರು ಇಂದು ಮಹಾನ್ ನಟನಾಗಲು ಜನಸಾಮಾನ್ಯರ ಈ ಸರಳ ಪ್ರೀತಿ ಅಭಿಮಾನವೇ ಸೀಂಹಪಾಲು ಕಾರಣವೆಂದರೆ ತಪ್ಪಾಗಲಾರದಲ್ಲವೇ? ಕನ್ನಡ ಚಿತ್ರರಂಗದ ಇತಿಹಾಸವನ್ನು ಡಾ. ರಾಜ್ ರಿಂದ ಹೊರತುಪಡಿಸಿ ಹೇಳಲು ಸಾಧ್ಯವೇ ಇಲ್ಲ. ಬಹುಶ ಇದುವರೆಗೂ ಯಾವೊಬ್ಬ ಉತ್ತಮ ನಟನಿಗೂ ಸಿಗದ ವಿಶೇಷ ಸ್ಥಾನಮಾನ, ಜನಪ್ರಿಯತೆಗೆ ಕಲವಾರು ಕಾರಣಗಳನ್ನು ನೀಡಬಹುದು.
ಕನ್ನಡ ಚಿತ್ರರಂಗ ಒಂದು ನಿರ್ದಿಷ್ಟ ಅವಸ್ಥೆಗೆ ಬಂದು, ಜನರನ್ನು ತನ್ನ ಮೋಹದ ಬಲೆಯೊಳಗೆ ಕೆಡವಿಕೊಳ್ಳಲು ಪ್ರಾರಂಭವಾದ ದಿನಗಳಲ್ಲೇ ನಟರಾದವರು ರಾಜ್ ಕುಮಾರ್. ಸಮಾಜದ ಹಲವು ಮಜಲುಗಳನ್ನು, ಜೀವನದ ವಿವಿಧ ಮುಖಗಳನ್ನು ಸುಂದರವಾದ ಕತೆ, ಇಂಪಾದ ಗೀತೆಗಳ ಮೂಲಕ ತೋರಿ ‘ಈ ಸಿನಿಮಾ’ ಎಂಬ ಬೆಡಗಿಯನ್ನು ನೋಡಲು ಕಾತುರ ಹುಟ್ಟಿದ ದಿನಗಳಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಂದಿನಿಂದ ಇಂದಿನವರೆಗೂ ನಾಲ್ಕು ದಶಕಗಳ ಕಾಲ ಎಲ್ಲೆಲ್ಲೂ ಅವರೇ ಆಗಿ, ಪ್ರತಿಯೊಬ್ಬ ಪ್ರೇಕ್ಷಕನೂ ತನ್ನನ್ನು ಈ ನಟನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದೇ ರಾಜ್ ಕುಮಾರ್ ಜನಪ್ರೀಯತೆಗೆ ಕಾರಣ. ಇಷ್ಟು ದೀರ್ಘಕಾಲ ನಟನಾಗಿ ನಟಿಸಿದ ಸಾಧನೆಯ ಜೊತೆಗೆ ಅಬಾಲವೃದ್ಧರಾದಿಯಾಗಿ ನಿರಂತರವಾಗಿ ಅಭಿಮಾನಿಗಳ ಪ್ರೀತಿಯನ್ನು ಹೊಂದಿರುವ ಎಂದೆಂದೂ ನಂಬರ್ 1 ಆಗಿಯೇ ಸಾಗುವ ನಟ ರಾಜ್ ಅಲ್ಲದೆ ಮತ್ಯಾರೂ ಆಗಲು ಸಾಧ್ಯವಿಲ್ಲ.
ಮೂರು ವರ್ಷಗಳ ಕಾಲ ಈ ಮಹಾನ್ ನಟ ಸಿನಿಮಾದಲ್ಲಿ ನಟಿಸದಿದ್ದಾಗ, ಪ್ರತಿಯೊಬ್ಬರೂ ಅವರದೇ ಆದ ಕಲ್ಪನಾ ಲೋಕದಲ್ಲಿ ಯೋಚಿಸಿದರು. ತಮಗೆ ಸರಿ ಅನ್ನಿಸಿದ್ದ ‘ರಾಜ್ ವೈಯಕ್ತಿಕ ಜೀವನದಲ್ಲಿ ಏನೋ ಏರುಪೇರಾಗಿದೆ’ ಎಂಬ ಸಣ್ಣ ಮಾತು ಊರೆಲ್ಲಾ ಹರಡಿ ಏನೇನೋ ಸುದ್ಧಿ, ಗದ್ದಲಗಳ ವದಂತಿಗಳಿಗೆ ಕಾರಣವಾಯಿತು. ಆ ಡಾ. ರಾಜ್ ತಮ್ಮ ಮೌನವನ್ನು ಮುರಿಯಬೇಕಾಯಿತು. ಪಾರ್ವತಮ್ಮ ರಾಜ್ ಗಾಗಿ ಸಿನಿಮಾವೊಂದನ್ನು ತೆಗೆಯಲು ನಿರ್ಣಯಿಸಬೇಕಾಯಿತು.
ಬಹುಶಃ ಇಂದು ಡಾ. ರಾಜ್ ರನ್ನು ಬಯ್ಯುವವರೆಲ್ಲಾ ಅವರನ್ನು ವೈಯಕ್ತಿಕವಾಗಿ ಭೇಟಿಮಾಡದವರು ಮತ್ತು ಅವರನ್ನು ಅರ್ಥಮಾಡಿಕೊಂಡಿಲ್ಲದವರು ಮಾತ್ರ. ನಂಬಲು ಕಷ್ಟವಾದ ಮುಗ್ದತನ ಹಾಗೂ ಸರಳತೆಗಳಿಗೂ ರಾಜ್ ಇಂದು ಸಾಧಿಸಿದ ಜನಪ್ರಿಯತೆಗೂ ಅರ್ಥಾತ್ ಸಂಬಂಧವಿಲ್ಲದ್ದರಿಂದಲೇ ರಾಜ್ ಬಹಳಷ್ಟು ಜನರ ಕಣ್ಣಿಗೆ ನಿಗೂಢವಾಗಿ ಕಾಣುತ್ತಾರೆ.
‘ಇತ್ತೀಚೆಗೆ ರಾಜ್ ಯಾರೋಂದಿಗೂ ಸಂದರ್ಶನ ನೀಡುತ್ತಿಲ್ಲ. ಪಾರ್ವತಮ್ಮನ ಸರ್ಪಗಾವಲಿನ ನಡುವೆ ಯಾರೂ ಅವರೊಡನೆ ಮನಬಿಚ್ಚಿ ಮಾತನಾಡಲಾರರು. ‘ ಹೀಗೆಲ್ಲಾ ಗುಸುಗುಸು ಆರೋಪಗಳ ನಡುವೆ ಹೋಗಿ ಸಂದರ್ಶನಕ್ಕೆಂದು ಕೇಳಿದಾಗ ತೀರಾ ಸರಳವಾಗಿ. ‘ಓಹೋ, ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಬನ್ನಿ ಬಿಡುವಾಗಿದ್ದೀನಿ’ ಎಂದರು.
ಸಂದರ್ಶನದಲ್ಲಿಯೂ ಪಾರ್ವತಮ್ಮನವರನ್ನು ರಾಜ್ ಅವರೇ ಕರೆದು ಕೂಡಿಸಿಕೊಂಡರು. ಅದನ್ನು ಸಂದರ್ಶನ ಎಂದು ಕರೆಯುವುದಕ್ಕಿಂತ ‘ಅನೌಪಚಾರಿಕ ಮಾತುಕತೆ’ ಎಂದರೆ ಉಚಿತ. ಎರಡೂವರೆ ಗಂಟೆಗಳಿಗೂ ಹೆಚ್ಚಿನ ಆ ಸಂದರ್ಭದುದ್ದಕ್ಕೂ ಪಾರ್ವತಮ್ಮ ‘ಕಾಫೀ, ಎಳನೀರು’ ಇಂತವುಗಳಿಗಾಗಿ ಮಾತನಾಡಿದರೆ ಹೊರತು ಅನಾವಶ್ಯಕವಾಗಿ ತಡೆ ಹಾಕಲಿಲ್ಲ. ಬದಲಾಗಿ ಮಾತುಕತೆ ಸರಾಗವಾಗಿರಲೆಂದು ತಾವೇ ಎದ್ದು ಹೊರಟುಹೋದರು.
ಸಂದರ್ಶನವೆಂದರೆ ರಾಜ್ ಅಂಡ್ ಕಂ. ಮೈಲಿ ದೂರ ಓಡಲು ಹಲವಾರು ಕಾರಣಗಳಿವೆ. ಪ್ರಶ್ನೆ ಕೇಳಲು ಬಂದವರು ಒಬ್ಬ ನಟನ ಸಾಧನೆ, ಕಲಾಜೀವನವನ್ನು ಹೊರತುಪಡಿಸಿ, ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಕೇಳಿ ಕಿರಿಕಿರಿ ಉಂಟುಮಾಡುತ್ತಾರೆ. ಎಲ್ಲರ ಹಾಗೆ ಅವರೂ ಮನುಷ್ಯರು. ನಮಗಿರುವ ಎಲ್ಲಾ ನೋವು ಕಷ್ಟ, ಸಂಸಾರದ ತಾಪತ್ರಯಗಳು ಅವರಿಗೂ ಇರಬಾರದೇಕೆ? ಅಂತೆಯೇ ಸಂಕಷ್ಟಗಳನ್ನು ಹೇಳಿಕೊಳ್ಳುವ ಮನಸ್ಸೇ ಅವರಿಗೆ ಇಲ್ಲದಾಗ ಕೆಣಕಿ, ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಅವರಿಂದ ಬರುವ ಉತ್ತರ ಖಂಡಿತಾ ಶೂನ್ಯವಾಗಿರುತ್ತದೆ. ಸಾಮಾಜಿಕ ಬದುಕಿನಲ್ಲಿ ಒಬ್ಬ ವ್ಯಕ್ತಿ ಪ್ರಸಿದ್ಧನಾದರೆ, ಅದರಲ್ಲೂ ಸಿನಿಮಾ ರಂಗದಲ್ಲಿ ಜನಪ್ರಿಯನಾದರೆ ಅವರಿಗೆಲ್ಲೂ ವೈಯಕ್ತಿಕ ಬದುಕೇ ನಷ್ಟವಾಗಿ ಅದು ಸಾರ್ವಜನಿಕ ಬದುಕಾಗುತ್ತದೆ. ಅಷ್ಟರ ಮಟ್ಟಿಗೆ ಅವರು ದುರದೃಷ್ಟವಂತರು. ಯಾವುದೇ ನಟನ ನೋವು ನಲಿವು ಹಂಚಿಕೊಳ್ಳುವುದು ಅಭಿಮಾನಿಗಳ ಹಕ್ಕೇ ಆದರೂ ಇಲ್ಲಿ ಎಷ್ಟೋ ಬಾರಿ ಸ್ಪಂದಿಸಬೇಕಾದ ಅಭಿಮಾನಿಗಳೇ ವದಂತಿ ಹರಡಿ ಮನರಂಜನೆ ಪಡೆಯುವುದು, ಆ ಕಾರಣವಾಗಿ ಗಲಾಟೆ, ಲೂಟಿ ಮಾಡುವುದು ವಿಷಾದದ ಸತ್ಯ. ಹೀಗಾಗಿ ಯಾವುದೇ ಅನಗತ್ಯ ಪ್ರಶ್ನೆಗಳನ್ನು ಕೇಳದ ಸರಳ ಸಂದರ್ಶನ, ಕೇವಲ ನಟನ ಬಗ್ಗೆ, ನಟನಾ ಜೀವನದ ಬಗ್ಗೆ ಅಭಿಮಾನಿಗಳಿಗಿರುವ ಕುತೂಹಲ ತಣಿಸುವ ಸಂದರ್ಶನ ಮಾತ್ರ ಇದಾಗಬೇಕೆಂಬ ಅಭಿಪ್ರಾಯ ಪತ್ರಿಕೆಯದಾಗಿತ್ತು.
ಪ್ರಶ್ನೆ: ನೀವು ಬುದ್ಧಿ ಬಂದಾಗಿನಿಂದ ಇಂದಿನವರೆಗೂ ನಾಟಕ- ಸಿನಿಮಾಗಳ ಬಣ್ಣ, ವೇಷ, ತಾಳಗಳ ಮಧ್ಯೆ ಇಡೀ ಜೀವನ ಸವೆಸಿದವರು. ಅಂತಹುದರಲ್ಲಿ ಮೂರು ವರ್ಷ ದಿಢೀರನೆ ನಟನೆ ನಿಲ್ಲಿಸಿದ ‘ನಟನಲ್ಲದ ರಾಜ್’ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಈ ದಿನಗಳಲ್ಲಿ ನಿಮ್ಮೊಳಗಿನ ಕಲಾವಿದನ ಮನಸ್ಥಿತಿ ಏನು?
ಉತ್ತರ: ನಮ್ಮೊಳಗಿನ ಕಲಾವಿದ? ನನ್ನನ್ನು ಕಲಾವಿದನನ್ನಾಗಿ ರೂಪಿಸಿದವರು ನಮ್ಮ ಜನರು. ಅವರೇ ಕಲಾವಿದನೆಂದು ಒಪ್ಪಿ ಡಾಕ್ಟರೇಟ್ ಸಹಾ ನೀಡಿದ್ದಾರೆ. ಆದರೆ ನಮ್ಮೊಳಗಿನ ಮನುಷ್ಯ ನೀವು ನೋಡುವ ರಾಜ್ ಕುಮಾರ್ ನನ್ನು ಕಲಾವಿದ ಎಂದು ಒಪ್ಪಿಕೊಂಡಿಲ್ಲ. ನನ್ನ ಜೀವನದಲ್ಲಿ ಎಂತೆಂತಹ ಮಹಾನ್ ನಟರ ಅಭಿನಯವನ್ನು ನೋಡಿದ್ದೇನೆ. ಅವರ ಮಟ್ಟವನ್ನು ಮುಟ್ಟಲು ನನ್ನಿಂದ ಸಾಧ್ಯವೇ?
ಗುಬ್ಬಿ ವೀರಣ್ಣನವರ ನಟನೆ ಜ್ಞಾಪಿಸಿಕೊಂಡರೆ ಈಗಲೂ ಸುಂದರವಾದ ಅನುಭವ. ಎಂತಹ ಪಾತ್ರಗಳಿಗೂ ಸೈ. ಆದರೂ ಅವರು ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರ ಮಾಡುತ್ತಿದ್ದರು. ನನ್ನ ವಯಸ್ಸಿಗೆ ತಕ್ಕಂತ ಕಥೆ ಸಿಕ್ಕಿದರೆ ನಟಿಸುತ್ತಿದ್ದೆ. ಏಕೋ.. ಯಾವುದೂ ಒಪ್ಪಿಗೆಯಾಗಲಿಲ್ಲ. ಆದ್ದರಿಂದ ಸುಮ್ಮನಿದ್ದೆ. ಆದರೆ ಈ ಬಿಡುವಿನ ಸಮಯ ಅತ್ಯಂತ ನೆಮ್ಮದಿಯ ಕಾಲ ಕೂಡಾ ಆಗಿತ್ತು. ನಾನು ವಿದೇಶಕ್ಕೆಲ್ಲಾ ಹೋಗಿದ್ದರೂ ಸಹಾ ನಮ್ಮ ಕನ್ನಡ ನಾಡಿನಷ್ಟು, ನನ್ನ ಹುಟ್ಟೂರು ಗಾಜನೂರಿನಷ್ಟು ಯಾವ ಸ್ಥಳವೂ ನನ್ನನ್ನು ಸೆಳೆದಿಲ್ಲ. ಹಿರಿಯರು ಮಾಡಿದ ಸ್ವಲ್ಪ ಭೂಮಿಯ ಜೊತೆಗೆ ನಾನೂ ಸ್ವಲ್ಪ ಭೂಮಿ ಖರೀದಿಸಿದೆ. ಅಲ್ಲಿ ನನ್ನೆಲ್ಲಾ ಹಿರಿಯರು ಬಾಳಿಬದುಕಿದ ಒಂದೂವರೆ ಅಂಕಣದ 105ವರ್ಷಗಳಷ್ಟು ಹಳೆಯದಾದ ಮಣ್ಣಿನ ಮನೆ ಇದೆ. ಗಾಜನೂರಿನ ಆ ಮನೆಗೆ ಹೋಗಿಬಿಟ್ಟರೆ ನನ್ನದೆನ್ನುವ ವಸ್ತುವೇನೋ ಸಿಕ್ಕಿದಂತೆ ಭಾಸವಾಗುತ್ತದೆ. ಅದು ಹೇಗೆ ಏನು ಅಂತ ಹೇಳೊಕಾಗಲ್ಲ. ಆದರೆ ಆ ಭೂಮಿ, ಮಣ್ಣು ಬಹಳ ನೆಮ್ಮದಿ ನೀಡುತ್ತದೆ. ಸದಾ ಕೃಷಿ ಮಾಡುತ್ತಾ ಅಲ್ಲಿಯೇ ಇರಬೇಕು ಎನಿಸುತ್ತದೆ. ಈ ಮೂರು ವರ್ಷಗಳಲ್ಲಿ ಅದನ್ನು ಬಿಟ್ಟು ಬೇರೆಯದೇನನ್ನೂ ಯೋಚಿಸಲೂ ನನಗೆ ಮನಸ್ಸು ಬರಲಿಲ್ಲ.
ಪ್ರಶ್ನೆ: ಕನ್ನಡಿಗರು ಒಂದಲ್ಲಾ ಒಂದು ವಯಸ್ಸಿನಲ್ಲಿ ನಿಮ್ಮ ಚಿತ್ರಗಳನ್ನು ನೋಡಿ ಆನಂದಿಸಿದವರೇ ಆಗಿದ್ದಾರೆ. ದಶಕಗಳ ಕಾಲ ಪ್ರೀತಿಯ ಹೊಳೆಯನ್ನೇ ಹರಿಸಿದ ಅಭಿಮಾನಿಗಳಿದ್ದಾರೆ. ಅಂತವರ ಅಭಿಮಾನಕ್ಕೆ ತಣ್ಣೀರೆರಚಿ ನಟನೆಯನ್ನು ಬಿಟ್ಟಿದ್ದರಿಂದ ಜನಪ್ರಿಯ ನಟರಾಗಿ ನಿಮ್ಮ ಸಾಮಾಜಿಕ ಕರ್ತವ್ಯವನ್ನು ಮರೆತಿದ್ದೀರ ಅನ್ನಿಸುತ್ತದೆ ಅಲ್ಲವೇ?
ಉತ್ತರ: ಓಹ್ ನನ್ನ ಅಭಿಮಾನಿಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಂದು ನಾನೇನಾಗಿದ್ದೀನೋ ಇದೆಲ್ಲ ಅವರ ಪ್ರೀತಿ, ವಿಶ್ವಾಸದ ಋಣ. ಅವರ ಪ್ರೀತಿ ನನ್ನನ್ನು ಹುಚ್ಚನನ್ನಾಗಿಸಿದೆ. ಎಷ್ಟೋ ಬಾರಿ ನಾನವರಿಗೆ ತಕ್ಕ ಸಿನಿಮಾ ನೀಡಲಿಲ್ಲ. ಅವರಾಸೆಗೆ ದ್ರೋಹಮಾಡಿದ್ದೇನೆ ಎಂದೆಲ್ಲಾ ಅನಿಸಿ ಕೊರಗುತ್ತೇನೆ. ಅವರಿಗೂ ನನಗೂ ಆಸೆಗೆ ತಕ್ಕಂತ ಕೃತಿ ಬರಲಿಲ್ಲ. ನನಗೇ ಆಶ್ಚರ್ಯ. ಏನೂ ಅಲ್ಲದ ನನಗೆ ಡಾಕ್ಟರೇಟ್ ಸಹಾ ನೀಡಿದ್ದಾರೆ. ದೊಡ್ಡ ನಟ ಅಂತೆಲ್ಲಾ ಕರೆದಾಗ ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತೇನೆ. ನನ್ನ ಅಭಿಮಾನಿಗಳಿಗೆಂತಾ ಸಿನಿಮಾ ಬೇಕು.? ನಾನೆಂತಹ ಸಿನಿಮಾಗಳಲ್ಲಿ ನಟಿಸಬೇಕು ಎಂದು. ವಿಚಿತ್ರ ನೋಡಿ ನನ್ನ ಅಭಿಮಾನಿಗಳ ಪ್ರಕಾರ ನನಗೆ ವಯಸ್ಸಾಗಬಾರದು, ಸಿಗರೇಟು ಕುಡಿಯಬಾರದು, ಕೆಟ್ಟ ಕೆಲಸ ಮಾಡಬಾರದು. ಒಟ್ಟಾರೆ ನನ್ನನ್ನು ಖಳನಾಗಿ ತೋರಿಸಲೇಬಾರದು. ಇಷ್ಟೆಲ್ಲಾ ಇತಿಮಿತಿಗಳ ನಡುವೆಯೇ ನಾನು ನಟಿಸಬೇಕು. ಆಯ್ತು ನಲವತ್ತು ವರ್ಷಗಳಿಂದ ನಟಿಸುತ್ತಲೇ ಇದ್ದೇನಲ್ಲ. ಈಗಲೂ ನಾಯಕನಾಗಿಯೇ ನಟಿಸಬೇಕೆಂದರೆ ಹೇಗೆ? ಮನಸ್ಸೊಪ್ಪುತ್ತಿಲ್ಲ.
ಈ ಚಿತ್ರ ‘ಜೀವನಚೈತ್ರ’ದಲ್ಲಿ ನೋಡಿ ನನ್ನ ಮಕ್ಕಳೇ ನಾನು ಮುದುಕನಾಗಿ ನಟಿಸಲು ಇಷ್ಟಪಡುತ್ತಿಲ್ಲ. ಎರಡನೇ ಮಗ ಅಂತೂ ‘ಅಪ್ಪಾಜಿ ವಯಸ್ಸಾದಂತೆ ಕಾಣಬಾರದು, ಬೇರೆ ವಿಗ್ ಇರಲಿ ಎಂದು ಗಲಾಟೆ ಮಾಡಿದ. ನಾನೇ ಸ್ವಲ್ಪ ಬಿಳಿಕೂದಲು ಹೆಚ್ಚಿರುವಂತೆ ಮಾಡಿಕೊಂಡೆ. ನೋಡಿ ಅಭಿಮಾನಿಗಳ ರೀತಿ ನಮ್ಮ ಮನೆಯವರೇ ನನಗೆ ವಯಸ್ಸಾಗಿದೆ ಎಂದು ಒಪ್ಪಿಕೊಳ್ಳುತ್ತಿಲ್ಲ.
ಪ್ರಶ್ನೆ: ಇಂದು ಚಿತ್ರರಂಗದಲ್ಲಿ ಕಲೆ ಎನ್ನುವುದು ವ್ಯಾಪಾರಿ ಮಾಧ್ಯಮವಾಗಿದೆ. ಬಹುಶಃ ನಿಮ್ಮ ಪೀಳಿಗೆಯ ನಯ, ವಿನಯ, ಭಕ್ತಿ, ಇಂದಿನವರಿಗಿಲ್ಲ. ಇಂದಿನವರು ಹೆಚ್ಚು ಸೃಜನಶೀಲರು. ಆದರೆ ಕಲೆಯ ಬಗ್ಗೆ ಗೌರವಕ್ಕಿಂತ ಹೆಚ್ಚಾಗಿ ಆಸಕ್ತಿ ಮಾತ್ರ ಇದೆ. ಹೀಗಾಗಿ ಹಳಬರಿಗೆ ನೀಡಬೇಕಾದ ಗೌರವ ಸಲ್ಲುತ್ತಿಲ್ಲ ಎಂದು ಅನಿಸುತ್ತಿಲ್ಲವೇ?
ಉತ್ತರ: ಇದಕ್ಕೆ ಕಾರಣವಿದೆ. ಅಂದು ನಮಗೆ ಹಾಡು ಸಂಗೀತ ಇತ್ಯಾದಿಗಳ ಜೊತೆಗೆ ನಟನೆಯನ್ನೂ ಕಲಿಸಿದ ಹಲವಾರು ಗುರುಗಳಿದ್ದರು. ಅವರು ರೂಪಿಸಿದ ಬದುಕೇ ನಮ್ಮದಾಗಿತ್ತು. ನಮ್ಮ ಹೊಟ್ಟೆಪಾಡಿಗೆ ಕಥೆಯೇ ಆಧಾರವಾಗಿತ್ತು. ಇಂದು ಪರಿಸ್ಥಿತಿ ತೀರಾ ಬೇರೆಯಾಗಿದೆ. ನಾನು ಇತ್ತೀಚೆಗೆ ಬರುತ್ತಿರುವ ಎಲ್ಲಾ ಭಾಷೆಯ ನಟರನ್ನು ಗಮನಿಸುತ್ತಿದ್ದೇನೆ. ಅವರೆಲ್ಲಾ ನಮ್ಮ ಹಾಗೆ ಯಾವ ಗರಡಿಯಲ್ಲೂ ಪಳಗಿದವರಲ್ಲ! ತಮ್ಮನ್ನು ತಾವೇ ರೂಪಿಸಿಕೊಂಡ ಸ್ವಯಂಕರ್ತರು. ಅವರಲ್ಲಿ ಈಗಲೂ ನಟನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡವರನ್ನು ನೋಡಿ ಸಂತೋಷಪಡುತ್ತೇನೆ. ಸ್ವ ಪ್ರಯತ್ನದಿಂದ ಮುಂದೆ ಬರುತ್ತಿರುವ ಯುವಪೀಳಿಗೆ ನನಗೆ ಇಷ್ಟ. ಆದರೆ ಇಂದಿನವರಲ್ಲಿ ಭಯಭಕ್ತಿ ಇಲ್ಲ ಎಂಬ ಮಾತೂ ಕೇಳಿದ್ದೇನೆ. ಅಭಿನಯ ಎಂದರೆ ಶೋಕಿ ಎನ್ನುವವರಿದ್ದಾರೆಂದು ಕೇಳಿದ್ದೇನೆ. ನನಗನ್ನಿಸುತ್ತದೆ ನಮ್ಮ ಚಿತ್ರೋದ್ಯಮದ ಜನ ಸಿನಿಮಾದಲ್ಲಿ ಸದಾ ಕೃಷಿ ಮಾಡುತ್ತಿರಬೇಕು. ಅದರಲ್ಲೇ ಲೀನವಾಗಬೇಕು. ಆಗ ಮಾತ್ರ ಏನನ್ನಾದರೂ ಗಳಿಸಲು ಸಾಧ್ಯ.
ಪ್ರಶ್ನೆ: ಅಭಿಮಾನಿಗಳಿಗೆ ನೀವು ಆದರ್ಶಪ್ರಾಯರು. ಇಡೀ ಜೀವನದುದ್ದಕ್ಕೂ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟುಕೊಂಡೇ ಬಂದವರು. ಹಣ ಇದ್ದೆಡೆ ಸ್ವಾತಂತ್ರ್ಯವಿರುತ್ತದೆ. ಆದರೆ ಹಣದ ಜೊತೆಗೆ ಚಿತ್ರರಂಗದ ಕೀರ್ತಿಯೂ ಪಡೆದರೆ ನಮ್ಮ ಸಾಮಾಜಿಕ ಬದುಕು ಒಂದು ಸೆರೆಮನೆಯಾಗುತ್ತದೆ. ನಿಮ್ಮ ಸ್ವಾತಂತ್ರ್ಯ ಅಪಹರಿಸಲ್ಪಟ್ಟು ಇಡೀ ಜೀವನವನ್ನು ಸುಂದರವಾಗಿ ಕಟ್ಟಿದ ಜೈಲಿನೊಳಗೆ ಇರಬೇಕಾಗುತ್ತದೆ. ಜನಸಾಮಾನ್ಯರಿಗೆ ಇರುವ ಸ್ವಾತಂತ್ರ್ಯ, ಎಲ್ಲರೊಡನೆ ಕುಟುಂಬದೊಡನೆ ಸುತ್ತಾಟ ಇತ್ಯಾದಿ ಯಾವುದೂ ಇಲ್ಲ. ಸಾಮಾಜಿಕ ಬದುಕಿನಲ್ಲಿ ಒಂದು ಇಮೇಜ್ ಸೃಷ್ಟಿ ಮಾಡಲು ಅಥವಾ ಅದನ್ನು ಕಾಯಲು ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕಳೆದುಕೊಂಡ ಮತ್ತು ಸ್ವಾತಂತ್ರ್ಯವಿಲ್ಲದ ಬದುಕು ನಿಮಗಿದೆಯೇ?
ಡಾ. ರಾಜ್ ಬಹಳ ಹೊತ್ತು ಮೌನವಾಗಿದ್ದರು. ನಂತರ ಆಕಾಶದತ್ತ ಕೈ ತೋರಿ, “ನಮ್ಮ ಜೀವನ ಎಂದು ಯಾವುದಾದರೂ ಇದೆಯಾ? ಇಲ್ಲ. ಎಲ್ಲಾ ನಮ್ಮ ಹಿರಿಯರು ರೂಪಿಸಿದ್ದು. ಆ ದಾರಿಯಲ್ಲಿ ನಾನು ನಡೆದು ಬಂದೆ ಅಷ್ಟೆ. ನನಗೆ ನನ್ನ ಇಷ್ಟ ಎಂಬುದು ಯಾವುದೂ ಇಲ್ಲ. ನಮ್ಮ ಕುಟುಂಬ ಅವಿಭಕ್ತ ಕುಟುಂಬ. ಎಲ್ಲಿಗೆ ಹೋದರೂ ದೊಡ್ಡ ಸಂಸಾರ ಹೊತ್ತೇ ಹೋಗುತ್ತಿದ್ದೆವು. ಇಲ್ಲೂ ನನ್ನದೆನ್ನುವ ಯಾವ ಯೋಚನೆಯೂ ಇರುತ್ತಿರಲಿಲ್ಲ. ಎಲ್ಲರ ತೀರ್ಮಾನವೇ ನನ್ನ ತೀರ್ಮಾನ. ಸಂತೋಷದಿಂದ ನೆಮ್ಮದಿಯಿಂದ ಇರಲು ಓಡಾಡಲು ನಮ್ಮ ಮನೆಯಿದೆ. ತೋಟವಿದೆ. ಮತ್ತೇನು ಬೇಕು? ನಾನು ಆಶಾವಾದಿ. ಈ ಬದುಕು ಏನೇನೆಲ್ಲಾ ನೀಡಿದೆ ಅದರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಪುರಂದರದಾಸರು ಹೇಳಿದ
ಜಗವಸುತ್ತಿಹುದು ನಿನ್ನ ಮಾಯೆ
ನಿನ್ನ ಸುತ್ತಿಹುದು ಎನ್ನಮನ ನೋಡಾ
ಕರಿಯು ಕನ್ನಡಿಯೊಳಗೆ ಅಡಗಿರ್ಪತೆರದಿ
ಎನ್ನೊಳಗೆ ಅಡಗಿಬಿಡೋ ಪುರಂದರವಿಠಲ
ಎಂಬ ಸಾಲುಗಳು ಜ್ಞಾಪಕಕ್ಕೆ ಬರುತ್ತಿವೆ.
ಪ್ರಶ್ನೆ: ಸಿನಿಮಾ ಜೀವನದಲ್ಲಿ ಯಾವುದಾದರೂ ನೆರವೇರದ ಆಸೆ ಇದೆಯೇ? ಅಭಿನಯಕ್ಕೆ ಸಂಬಂಧಿಸಿದಂತೆ
ಉತ್ತರ: ಹೂಂ ಬೇಕಾದಷ್ಟಿವೆ. ರಾಮಾಯಣವನ್ನು ಮಾಡುವ ಆಸೆ ಬೆಟ್ಟದಷ್ಟಿತ್ತು. ಕವಿರತ್ನ ಕಾಳಿದಾಸನ ಬಗ್ಗೆಯೂ ಆಸೆ ಪಟ್ಟಿದ್ದೆ. ಇಂತಹ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯೇನೋ ಇತ್ತು. ಆದರೆ ಒಂದು ಚಿತ್ರವೆಂದರೆ ಇಡೀ ತಂಡದ ಕೆಲಸ. ಕತೆ ಎನ್ನುವುದು ಚಿತ್ರಕ್ಕೆ ಕಣ್ಣಿದ್ದ ಹಾಗೆ. ಆ ಕಣ್ಣನ್ನು ನಮ್ಮ ಕಥೆಗಾರರು ಸೃಷ್ಟಿ ಮಾಡಿದ ಮೇಲಲ್ಲವೇ ನಾವೆಲ್ಲ ನಟಿಸುವ ಪ್ರಶ್ನೆ?"
ಇಲ್ಲಿಗೆ ಪ್ರಶ್ನೆ ಕೇಳಿ ಉತ್ತರಿಸುವ ಒಂದು ಹಂತ ಮುಗಿದುಹೋಯಿತು. ನಂತರದ ಮಾತುಕಥೆಗಳೆಲ್ಲಾ ಸರ್ವೇಸಾಧಾರಣವಾಗಿ ನಡೆದರೂ, ಡಾ. ರಾಜ್ ಕುಮಾರರ ಮಾತಿನ ಧಾಟಿಯಿಂದಾಗಿ, ಹಾಸ್ಯ ಪ್ರಜ್ಞೆಯಿಂದಾಗಿ ಕುಳಿತಿರುವಷ್ಟೂ ಕಾಲವೂ ನಕ್ಕಿದ್ದೇ ಆಯಿತು. ಅಷ್ಟರಲ್ಲಿ ಎಳನೀರು ಬಂತು. ಡಾ. ರಾಜ್ “ತೆಗೆದುಕೊಳ್ಳಿ, ನಮ್ಮ ತೋಟದ್ದು. ಎಲ್ಲಾ ನಾವೇ ನೋಡಿಕೊಂಡಿದ್ದು, ಬೆಳೆಸಿದ್ದು” ಎಂದು ಹೆಮ್ಮೆಯಿಂದ ಹೇಳಿದರು.
ಮಾತನಾಡಿದಷ್ಟೂ ಕಾಲವೂ ಅವರು ಆಧ್ಯಾತ್ಮಿಕದತ್ತ ಬಲವಾಗಿ ಸೆಳೆಯಲ್ಪಟ್ಟಿದ್ದಾರೆಂದು ವ್ಯಕ್ತವಾಗುತ್ತಿತ್ತು.
“ನಿಮ್ಮ ನೋವನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲವೇ?” ಎಂಬ ಪ್ರಶ್ನೆಗೆ
“ನೋವು ನಿರಂತರವಾದುದು. ತಾಯಿಯನ್ನು ಇತ್ತೀಚೆಗೆ ಕಳೆದುಕೊಂಡೆ. ಅದರ ನೋವನ್ನು ಇನ್ನೂ ಅನುಭವಿಸುತ್ತಿದ್ದೇನೆ. ಅದನ್ನು ಇನ್ನೊಬ್ಬರಿಗೆ ಹೇಳಿ ಉಪದೇಶ ಕೇಳುವುದಕ್ಕಿಂತ ನಮಗೆ ನಾವೇ ಉಪದೇಶ ಹೇಳಿಕೊಂಡರೆ ಒಳ್ಳೆಯದಲ್ಲವೇ?” ಎಂದರು. ಇವರ ಅನುಭವದ ನುಡಿಯಂತೆ ಇದು ಸತ್ಯವೂ ಹೌದು.
ಸಣ್ಣ ಕುತೂಹಲವೊಂದು ಹುಟ್ಟಿತು. ಡಾ. ರಾಜ್ ಎಲ್ಲರ ಕಣ್ಮಣಿ. ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರಲ್ಲಾ.. ಇವರು ಯಾರ ಅಭಿಮಾನಿ? ಎಂದಾಗ ತಟಕ್ಕನೆ ಪತ್ನಿಯತ್ತ ದೃಷ್ಟಿ ಹಾಯಿಸಿ, “ನಾನು ಪಾರ್ವತಿಯ ಫ್ಯಾನ್” ಎಂದರು. “ಇವರನ್ನು ಬಿಟ್ಟು ನಿಮ್ಮ ಲೈಫ್ ನಲ್ಲಿ ಯಾರಾದರೂ..?” ಎಂದಾಗ, “ಅಶೋಕ್, ಮೀನಾಕುಮಾರಿ, ನರ್ಗೀಸ್, ರಾಜ್ ಕಪೂರರ ಹೆಸರು ಸಾಲಾಗಿ ಬಂದವು. ರಾಜ್ ರದು ದೈತ್ಯ ಪ್ರತಿಭೆ. ಇವರನ್ನೆದುರಿಸಿ ಸವಾಲು ಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ. ಆದ್ದರಿಂದಲೇ ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಹೆಸರು ಕಣ್ಣು ಹಾಯಿಸಿದಷ್ಟು ದೂರವೂ ಕಂಡು ಬರುತ್ತದೆ.
ಎಲ್ಲಾ ಭಾಷೆಯ ಚಿತ್ರಗಳನ್ನೂ ರಾಜ್ ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ. ಬರುತ್ತಿರುವ ಯುವ ಪೀಳಿಗೆಯ ಸಾಧನೆಯನ್ನು ಪ್ರಶಂಸಿಸುತ್ತಾರೆ. ಸ್ಟುಡಿಯೋನಲ್ಲಿ ಭೇಟಿಯಾದ ನಿರ್ದೇಶಕ ಫಣಿರಾಮಚಂದ್ರ ಅವರನ್ನು ನೋಡಿದ ಕೂಡಲೇ ಸಂತೋಷದಿಂದ ಅಪ್ಪಿ ಮಾತನಾಡಿಸಿ, ಅವರ ಸಿನಿಮಾ ಬಗ್ಗೆ ಹೊಗಳಿ ಮಾತನಾಡಿದರು. ಅಲ್ಲೇ ಡಬ್ಬಿಂಗ್ ನಡೆಯುತ್ತಿರುವ ‘ಗಣೇಶ-ಸುಬ್ರಹ್ಮಣ್ಯ’ ಚಿತ್ರವನ್ನು ಬಹಳ ಹೊತ್ತು ಕುಳಿತು ವೀಕ್ಷಿಸಿದರಲ್ಲದೆ “ನಮ್ಮಲ್ಲಿ ಎಂತೆಂತ ಒಳ್ಳೆಯ ನಿರ್ದೇಶಕರಿದ್ದಾರೆ. ಫಣಿಯವರ ಗೌರಿ-ಗಣೇಶ ಕ್ಯಾಸೆಟ್ ಹಾಕಿ ಎರಡು ಬಾರಿ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ನನಗಿಷ್ಟವಾಯಿತು.” ಎಂದರು. ಹಾಗೆಯೇ ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಶಿಬೂ ಚಕ್ರವರ್ತಿ. ಈತ ಮಲೆಯಾಳಂ ಸಿನಿಮಾ ಕಥೆಗಾರ. ಬಹುತೇಕ ಈತನ ಸಿನಿಮಾಗಳೆಲ್ಲವೂ ಮುಮ್ಮುಟ್ಟಿಯಂತಹ ಸೂಪರ್ ಸ್ಟಾರ್ ಗಳಿಗೆ ರಚಿತವಾಗಿ ಆ ಸಿನಿಮಾಗಳು ಸಾಕಷ್ಟು ಹಣ ಕೂಡಾ ಮಾಡಿವೆ. ಆ ವಿಷಯ ಇವರಿಗೆ ತಿಳಿದಾಕ್ಷಣ ಆತನ ಕೈ ಹಿಡಿದು “ಮುಮ್ಮುಟ್ಟಿ ಬಹಳ ಒಳ್ಳೆಯ ನಟ. ಮಲೆಯಾಳಂನಲ್ಲಿ ಎಂತಹ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಅಲ್ಲಿ ಒಳ್ಳೆಯ ಅಭಿರುಚಿ ಇರುವ ನಟರ ಜೊತೆಗೆ ಪ್ರೇಕ್ಷಕರೂ ಸ್ಪಂದಿಸುವವರೇ ಆಗಿದ್ದಾರೆ.” ಎಂದರು. ಈ ಇಬ್ಬರಿಗೂ ಅವರು ನೀಡಿದ ಗೌರವ, ಪ್ರೀತಿ..ಅವರು ಕಲೆಗೆ ನೀಡುವ ಮಹತ್ವವನ್ನು ಎತ್ತಿ ತೋರುವಂತಹುದು.
ಈ ನಟನಿಗೆ ವಿಶಿಷ್ಟ ವರ್ಚಸ್ಸು ಬಂದಿರುವುದೇ ಅವರ ಅಸಂಖ್ಯಾತ ಅಭಿಮಾನಿಗಳಿಂದ. ಅವರ ಶಕ್ತಿ ಅಪಾರವಾದದ್ದು. ಅಲ್ಲಲ್ಲಿ ನಿಂತಿದ್ದ ಅಭಿಮಾನಿಗಳನ್ನು ಕರೆದು ರಾಜ್ ಮತ್ತೆ ಅಭಿನಯಿಸುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಲಾಯಿತು. ಒಬ್ಬಯುವಕ “3 ವರ್ಷಗಳಿಂದ ಸುಮ್ಮನಿದ್ದೀರಲ್ಲ, ಅವರ ಮಕ್ಕಳು ಆಸ್ತೀಲಿ ಪಾಲು ಕೇಳಿದ್ದಾರೆ, ಏನೇನೋ ಗಲಾಟೆ ಮಾಡ್ತಿದ್ದಾರೆ ಅಂತ ಕೇಳಿದ್ದೆವು. ಆದರೆ ಈಗ ಇಲ್ಲಿ ದಿನಾ ಬರ್ತಿದ್ದೀವಿ, ಅಣ್ಣಾವ್ರು, ಅಕ್ಕಾವ್ರು ಅವರ ಮಕ್ಕಳು ಎಲ್ಲಾ ಚೆನ್ನಾಗಿ ಸಂತೋಷವಾಗಿರೋದನ್ನು ಕಣ್ತುಂಬಾ ನೋಡ್ತಿದ್ದೀವಿ. ಸಮಾಧಾನ ಪಟ್ಟುಕೊಂಡಿದ್ದೀವಿ” ಎಂದ.
ಬಹಳಷ್ಟು ಅಭಿಮಾನಿಗಳು ಇಂತಹ ಮಾತುಗಳನ್ನು ಪುನರಾವರ್ತಿಸಿದರು. ಎಲ್ಲರಿಗೂ ಇದ್ದ ಆತಂಕ ‘ಅಣ್ಣಾವ್ರ ಮನೆಯಲ್ಲಿ ಏನೋ ಒಡಕುಂಟಾಗಿದೆ. ಅದನ್ನು ನಂಬಿದ್ದ ಬಹಳಷ್ಟು ಜನ, ಅಣ್ಣಾವ್ರು ನಗುತ್ತಾ ಓಡಾಡುವುದನ್ನು, ಬಿಡುವಿನಲ್ಲಿ ಪಾರ್ವತಮ್ಮ –ರಾಜ್ ಇಬ್ಬರೇ ಕುಳಿತು ಏನೋ ಮಾತನಾಡುತ್ತಿರುವುದನ್ನು ದೂರದಿಂದಲೇ ಕಂಡು ಸಮಾಧಾನಮಾಡಿಕೊಂಡರಂತೆ..!
ಬಹಳಷ್ಟು ಜನರ ಆಕ್ರೋಶಕ್ಕೆ ಕೇಂದ್ರಬಿಂದು ಪಾರ್ವತಮ್ಮ. ಅವರು ಮನಸ್ಸು ಮಾಡಿದರೆ ಡಜನ್ ಗಟ್ಟಲೆ ಅಣ್ಣಾವ್ರ ಸಿನಿಮಾ ತೆಗೆಯಬಹುದಿತ್ತು. ಬರೀ ಮಕ್ಕಳ ಚಿತ್ರದತ್ತ ಗಮನ ಹರಿಸಿ ಗಂಡನ ಚಿತ್ರದತ್ತ ಗಮನ ಹರಿಸುತ್ತಿಲ್ಲ ಎಂದೇ ಭಾವಿಸಿದ್ದರು.
ಆದರೆ ವಾಸ್ತವದಲ್ಲಿ ಪಾರ್ವತಮ್ಮನವರ ಹಠ, ಛಲ ಮತ್ತೆ ರಾಜ್ ರನ್ನು ಚಿತ್ರರಂಗಕ್ಕೆ ಎಳೆದು ತಂದಿದೆ. ಇನ್ನೊಂದೆರಡು ತಿಂಗಳಲ್ಲಿ ‘ಮನಸು ಮಲ್ಲಿಗೆ’ಗೆ ಹೇಗಾದ್ರೂ ಮಾಡಿ ಒಪ್ಪಿಸಿ ಶುರು ಮಾಡ್ತೀನಿ. ನಂತರ ‘ನೃಪತುಂಗ’ ಎಂದು ಹೇಳುತ್ತಿದ್ದರು. ಅಂದುಕೊಂಡಿದ್ದನ್ನು ಸಾಧಿಸುವ ಛಲ, ಹುಮ್ಮಸ್ಸು ಆಕೆಯಲ್ಲಿ ಎದ್ದು ಕಾಣುತ್ತಿತ್ತು.
ಮಾತಿನ ಮಧ್ಯೆ ರಾಜ್ ತಮ್ಮ ಪತ್ನಿಯ ಬಗ್ಗೆ “ಈಗೆ ಇಲ್ಲಿಗೆ ಬೆನ್ನೆಲುಬಿದ್ದ ಹಾಗೆ, ಎಲ್ಲಾ ವ್ಯವಹಾರವನ್ನೂ ನೋಡಿಕೊಳ್ಳುವುದರಿಂದ ಆಕೆಯ ಕೊಡುಗೆ ಈ ಸಂಸ್ಥೆಗೆ ತುಂಬಾ ಇದೆ.” ಎಂದರು.
ನಿಜ, ಇಡೀ ಸಂಸ್ಥೆ ನಿಂತಿರುವುದು ಆಕೆಯ ಧೈರ್ಯದಿಂದ, ಬುದ್ಧಿವಂತಿಕೆಯಿಂದ. ರಾಜ್ ವೃತ್ತಿ ಸಂಬಂಧ ವಿಷಯ ಬಂದಾಗ ಆಕೆಯಿನ್ನೂ ಕಪ್ಪೆಚಿಪ್ಪಿನೊಳಗೇ ಇದ್ದಾರೆ ಅನ್ನಿಸುತ್ತದೆ. ಎಲ್ಲಾ ಅಭಿಮಾನಿಗಳಂತೆ ಅವರೂ ಸಹಾ ವಯಸ್ಸಾದ ರಾಜ್ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಉತ್ತಮ ಚಿತ್ರಗಳನ್ನು ನೀಡುವ ರಾಜ್ ಕಂಪನಿಯಲ್ಲಿ ಪಾರ್ವತಮ್ಮನ ನಿರ್ದಾರವೇ ಕಡೆಯ ನಿರ್ಧಾರ. ಆ ಕಾರಣಕ್ಕಾಗಿಯೇ ಅವರು ಕನ್ನಡದಲ್ಲಿ ಬಹುತೇಕ ಎಲ್ಲಾ ಕಾದಂಬರಿಗಳನ್ನು ಓದು ಮುಗಿಸಿದ್ದಾರೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಂತಹಾ ಕಾದಂಬರಿಯ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಆದರೂ ಪಾರ್ವತಮ್ಮ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಸಿನಿಮಾ ನಿರ್ಮಿಸಬಾರದೇಕೆ? ಎಂದಾಗ ಅವರಿನ್ನೂ ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ.
ಕುವೆಂಪು ಅವರ ಕಾದಂಬರಿಯನ್ನು ತೆರೆಗೆ ತರಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದರೆ, ಅವರ ವಿಶ್ವ ಮಾನವ ಸಂದೇಶವನ್ನು ಸಾರುವ ಚಿತ್ರ ಕಥೆಯೊಂದನ್ನು ನಿರ್ಮಿಸಬಾರದೇಕೆ? ಎಂದು ಸೂಚಿಸಿದಾಗ ಡಾ. ರಾಜ್ ಹಾಗೂ ಪಾರ್ವತಮ್ಮ ಇಬ್ಬರಿಗೂ ಖುಷಿ. ಅಂತಹ ಕಥೆ ಯಾರಾದರೂ ರಚಿಸಿದ್ದೇ ಆದರೆ ಖಂಡಿತಾ ಆ ಚಿತ್ರ ನಿರ್ಮಿಸುವೆವು ಎಂದರು. ಮಾತು ಕಥೆ ಎಲ್ಲಾ ಮುಗಿದು ಸ್ಟುಡಿಯೋ ಹೊರಗೆ ಹೊರಟಾಯ್ತು. ಗೇಟಿನಲ್ಲಿ ನಿಂತಿದ್ದ ವೃದ್ಧನನ್ನು ಈ ಚಿತ್ರದ ಬಗ್ಗೆ ಕೇಳಿದಾಗ “ಹೀರೋಯಿನ್ ಯಾರೋ ಮಾಧವಿ ಅಂತೆ. ನಮ್ಮ ಕಾಲದ ಲೀಲಾವತಿನೋ, ಜಯಂತಿನೋ, ಭಾರತೀನೋ ಅಗಿದ್ರೆ ಬೊಂಬಾಟಾಗಿರ್ತಿತ್ತು.” ಎಂದು ಬಾಯಿಚಪ್ಪರಿಸಿದವನೇ “ಯಾರಾದರೇನು ನಮಗೆ ಅಣ್ಣಾವ್ರು ಮುಖ್ಯ. ಅಣ್ಣಾವ್ರು ಬೇಕಮ್ಮ ಅಣ್ಣಾವ್ರು” ಎಂದು ಕೂಗಿದ.
ಬಹುಶಃ ಈ ರೀತಿ ಅಭಿಮಾಣಿಗಳೆಲ್ಲರ ಕೂಗೇ ಡಾ. ರಾಜ್ ಕುಮಾರರನ್ನು ಮತ್ತೆ ಬೆಳ್ಳಿ ತೆರೆಗೆ ಕೈ ಹಿಡಿದು ಕರೆತಂದಿದೆ.
ರೇಖಾರಾಣಿ.